Tuesday, August 9, 2011

ವಲಸೆ ಬಂದ ಹಕ್ಕಿಗಳು

ನೋಡು ಗೆಳತಿ ಏನಾಗಿದೆ ಈ ನಾಡು.
ಎಲ್ಲಿ ಕಳೆದು ಹೋಯಿತೋ
ನಾವಿಬ್ಬರೂ ಕಟ್ಟಿದ ಕನಸಿನ ಗೂಡು....?

ಕಳೆದ ಹೇಮಂತದಲಿ ಕಂಡ ಸ್ವರ್ಗವದೆಲ್ಲಿ?
ಶಿಶಿರ-ವಸಂತಗಳ ಬೆರಗು ನೋಟಗಳೆಲ್ಲಿ?
ಎತ್ತ ಕಣ್ಣು ಹರಿಸಿದರೂ ಹಸಿರು ದುಪ್ಪಟ ಹೊದಿಕೆ,
ತುಂಬಿ ತುಳುಕುವ ಕೆರೆಯ, ಸುಭೀಕ್ಷ ತಾಣವದೆಲ್ಲಿ?

ರೆಕ್ಕೆಗಳು ನೋಯುತ್ತಿವೆ ಅಲೆದಲೆದು ಸುತ್ತಾ,
ವನಗಳನು ಕಬಳಿಸಿವೆ ಬರಿಯ ಗೋಡೆಗಳು;
ಬತ್ತಿ ಹೋಗಿವೆಯಲ್ಲ ಕೆರೆ-ತೊರೆಗಳೆಲ್ಲಾ!
ಯಾರು ಇರಬಹುದು ಈ ನಿರ್ವನದೊಳೆಲ್ಲ?

ಮರಗಳನು ಬುಡದಿಂದ ಕಿತ್ತು ತಿಂದಿಹರೋ?
ಕೆರೆ-ತೊರೆಯ ಜಲ ಹೀರಿ ತೇಗಿ ಮಲಗಿಹರೋ?

Tuesday, August 2, 2011

ಮಿಲನ

ಭೂಮಿ ಶಿಖರ, ಬಾನು ಪ್ರಖರ,
ತುಟ್ಟತುದಿಯಲಿ ಜೀವ...
ಎಲ್ಲ ಮರೆತು ತನ್ನ ತಾನೇ
ಕೊಟ್ಟು ಬಿಡುವ ಭಾವ....

ನೀತಿ-ಭೀತಿಯ ಮೀರಿ ನಿಂತು
ಬೀಗುವಂಥ ಸಮಯ,
ನನ್ನ ಪರಿಚಯವಿಲ್ಲ ನನಗೆ
ಈಗ ನಾನು ಪ್ರೇಮಮಯ...

ಕೊಡುವುದೇನು ಪಡೆವುದೇನು?
ಇಲ್ಲ ಅದರ ಅರಿಕೆ,
ಬೆಳಕಿನಲ್ಲೂ ಕಣ್ಣುಗತ್ತಲು
ಮಿಲನ ಒಂದೇ ಬಯಕೆ.....

ಧನ್ಯತೆಯ ತನ್ಮಯತೆಯೊಂದಿಗೆ
ಬಂತು ನಿಟ್ಟುಸಿರಿಂದು,
ಯುಗಗಳಿಂದ ಸಾಗಿಬಂದ
ತೇರ ಸಾಗಿಸಿ ಮುಂದು...

ಮೇಘದಿಂದ ಇಳಿದುಬಂದ
ನೀರ ಹನಿಯು ಇಂದು,
ಭೂಮಿಗಿಳಿದು ಬೀಗುತಿಹುದು
ಗಂಗೆ ತಾನು ಎಂದು....

ತಾಲಿಯಲ್ಲಿ ಸ್ತಬ್ದವಾದ
ಒಂದು ಬೊಗಸೆ ಜಲವೂ
ಮರಣ ಸಮಯಕೆ ಜೀವ ಜಲವು
ಗಂಗೆಯೇ ಅವಳೆಂದೂ...

ಬೆರೆವವರೆಗೆ ನಾನು ಯಾರೋ,
ನೀನು ಯಾರೋ ಎಂದು,
ಬೇರೆತಮೇಲೆ ನಾನೇ ನೀನು
ನೀನೆ ನಾನು ಎಂದೂ....

ನನ್ನತನದಲಿ ನಿನ್ನ ತುಣುಕಿದೆ,
ನಿನ್ನತನದಲಿ ನಂದು,
ಹೇಗೆ ಬೀಗಲಿ ಹೇಳು ಒಲವೇ
ನಾನು ನಾನೇ ಎಂದು?

Sunday, November 22, 2009

ಗ್ರಂಥ

ನಾನು ಪದ, ನಾವು ವಾಕ್ಯ, ನಾಡೇ ನಮ್ಮ ಗ್ರಂಥವು,
ಎತ್ತ ನೋಡಲತ್ತ ಉಂಟು ಕಲಿಕೆಯಾ ದಿಗಂತವು.

ಒಂದು ಪದದ ಅರ್ಥ ನೂರು, ಸೃಜನಶೀಲ ತಂತ್ರವು,
ಒಂದು ಪ್ರೇಮ ಕವಿಯ ಸಾಲು, ಒಂದು ವೇದ ಮಂತ್ರವು.

ಒಂದು ಪದದ ಸಾರ ಇತಿಹಾಸವನ್ನೇ ನೆಡುವುದು,
ಒಂದು ಪದದಲಾದ ಡೊಂಕು ಗ್ರಂಥವನ್ನೇ ಜರಿವುದು.

ನಿನ್ನ ಅರ್ಥ - ನನ್ನ ಅರ್ಥ ಬೇರೆ ಕಾಣೋ ತಮ್ಮ,
ನಮ್ಮ ಬೆರೆಸಿ ಗ್ರಂಥವಾಗಿಸಿಹಳು ಕನ್ನಡಮ್ಮ.

Wednesday, November 11, 2009

ಗೋಚರ

ನನ್ನ ಮನದಲಿರುವೆಯೆಂದು
ತಿಳಿಯಲಿಲ್ಲ ನನಗೆ,
ಲೋಕವೆಲ್ಲಾ ಬದಿಗೆ ಇಟ್ಟು
ನಿನ್ನ ಕಾಯೋವರೆಗೆ.


ಬಯಸಿದಾಗ ತಿಳಿಯಿತೆನಗೆ
ನಿನ್ನ ಬಯಕೆ ಏನು...
ಮೋಹಚರಕೆ ನೂರು ಮುಖ
ಕಾಣದಾದೆ ನಾನು...



ನಿನ್ನ ಮನದ ಒಳಗೆ ನುಡಿವ
ಮಾತು ತಿಳಿಯಲಾರೆ,
ತಿಳಿಸು ನನಗೆ, ನಾನೂ ಮಿಡಿವೆ,
ಕಾಯಿಸದೆಯೇ ಬಾರೆ.

ವಿರಹವೊಂದು ಧ್ಯಾನ,
ನೀನೆ ಕೇಂದ್ರ ಬಿಂದು,
ಬಂದು ಬೇಗ ಎಚ್ಚರಿಸು
ತುಟಿಗೆ ಮುತ್ತು ತಂದು.

Thursday, October 29, 2009

ಮೋಜಾಟ

ಏನಿದು ಮೋಜಾಟ?
ಬೆಂಕಿಯುಂಡೆ ಸುತ್ತ ಓಟ,
ದಿನವೂ ಬೆಳಕು ಕತ್ತಲಾಟ,
ಏನಿದು ಮೋಜಾಟ?

ಅಗೋ ಅವನೇ ತಂದೆ ಅವನು
ಅವನ ಸುತ್ತ ಮಕ್ಕಳು,
ಅವನ ಕಣ್ಗೆ ಬಟ್ಟೆ ಕಟ್ಟಿ
ಕೈಯ ತಟ್ಟಿ ಕರೆವರು.

ಅವನೋ ಇವಳೋ ಬಳಿಗೆ ಹೋಗಿ
ಕೂಗಿ ಅವನ ಹೆಸರನು,
ಕರೆದರೂನು ಅಲುಗದೇನೆ
ನಿಂತಕಡೆಯೇ ಇರುವನು.

ಮುಟ್ಟಲಾರರಾರೂ ಅವನ
ಮುಟ್ಟಲಾಟ ಮುಗಿವುದು,
ಕಣ್ಣ ಬಟ್ಟೆ ಬಿಚ್ಚನವನು
ಬಿಚ್ಚಲಾಟ ಮುಗಿವುದು.

Wednesday, October 7, 2009

ಬಾಗಿಲ ಒಳಗೆ

ಒಳಗೆ ದೇವನಿದ್ದಾನೆಂದು ಬಾಗಿಲಿಗೇ ಕೈ ಮುಗಿದೆ.
ನಷ್ಟವಾಯಿತು ಕಷ್ಟ, ಮತ್ತೆ ಬಂದು
ಬಾಗಿಲಿಗೇ ಕೈ ಮುಗಿದೆ.

ಒಂದು ಕುತೂಹಲ ಮೂಡಿತ್ತು ಮನದಲ್ಲಿ,
ಒಂದೊಮ್ಮೆ ಬಾಗಿಲನು ತೆರೆದೆ;
ಮನದಲ್ಲಿ ಅಳುಕಿತ್ತು, ಭಕ್ತಿಯಾ ಬೆಳಕಿತ್ತು,
ಅನುಮಾನದ ಕತ್ತಲೆಯ ಕಳೆದೆ.

ಒಳಗೊಂಡು ಕೊಳವಿತ್ತು, ತಿಳಿ ನೀರ ಕಲ್ಯಾಣಿ,
ಚಂದ್ರನಿಗೆ ಹಿಡಿದಂತೆ ಕನ್ನಡಿ;
ಬುವಿಯು ಬೆಳಕನ್ನು ಬೀಳ್ಕೊಡುತ್ತಿತ್ತು,
ನೆರಳು ಅಳಿಸಿತ್ತು ನನ್ನಡಿ.

ಒಳಗೆ ಕತ್ತಲೆ ಎಲ್ಲ, ದೀಪ ಹಚ್ಚುವರಿಲ್ಲ
ಹೊತ್ತಾಯಿತೇನೋ ನಾ ಬಂದದ್ದು,
ಎನಿಸುವಷ್ಟರಲ್ಲಿ ತಾರೆಗಳು ಮಿನುಗಿತ್ತು,
ತಿಳಿನೀರದ ಇಮ್ಮಡಿಗೊಳಿಸಿತ್ತು.

ಹಗಲೆಲ್ಲ ಸೃಷ್ಟಿಯ ಬಿಡಿಸಿದ ಕುಂಚ
ತಂಗುವ ಸಂಧ್ಯಾ ಸಮಯ,
ನೀರಲಿ ತೊಳೆದು ಬಾನಿಗೊರೆಸಿದ ಹಾಗೆ
ಮೋಡವನು ಕಂಡಿತ್ತು ಹೃದಯ.

ಗುಡಿಯ ಕಲ್ಗಂಬಗಳು ಹುಣ್ಣಿಮೆಯ ಬೆಳಕಿನಲಿ
ಬೆಳ್ಳಿ ದೀಪದ ಕಂಬದಂತಿತ್ತು,
ದೇಗುಲದ ಒಳಗಲ್ಲಿ ಎಲ್ಲವೂ ಪ್ರಶಾಂತ,
ನನ್ನ ಮನ ಒಂದೇ ನುಡಿದಿತ್ತು...

Wednesday, July 1, 2009

ಸಾರ್ಥಕತೆ

ನಗುವದೆಲ್ಲ ಹೂವಿಗಿರಲಿ
ಭೂಮಿತಾಯಿ ನಲಿಯಲಿ,
ನೋವದೆಲ್ಲ ಕವಿಗೆ ಇರಲಿ
ನೂರು ಕವಿತೆ ಅರಳಲಿ.

ಬೆವರ ಹನಿಯು ರೈತನಾಸ್ತಿ
ಅನ್ನ ನಮಗೆ ಕೊಡಲಿ.
ನಿನ್ನ ವರವು ತಾಯಿಗಿರಲಿ
ಮಡಿಲ ಕಂದ ನಗಲಿ.

ಸೋಲು ಎಂದೂ ಮನಸಿಗಿರಲಿ
ಒಲವು ಅರಳುತಿರಲಿ,
ಧರ್ಮ ಬಾಳನಾಳುತಿರಲಿ
ನೀತಿ ತಪ್ಪದಿರಲಿ.

ಶಕ್ತಿ ಯೋಧನಲ್ಲಿ ಇರಲಿ
ವೈರಿ ಉಳಿಯದಿರಲಿ,
ಗೆಲುವು ಎಂದೂ ಸತ್ಯಕಿರಲಿ
ಧರ್ಮ ಅಳಿಯದಿರಲಿ.